ನೀರಿನ ಕೊರತೆ (ದೇಹದಲ್ಲಿ)

ಅತಿಸಾರ, ಆಮಶಂಕೆ, ಕಾಲರಾ ಮುಂತಾದ ರೋಗ ಸ್ಥಿತಿಗಳಲ್ಲಿ ಅತಿಯಾಗಿ ಭೇದಿ ವಮನಗಳು ಉಂಟಾದಾಗ ಇಲ್ಲವೇ ಬೆಂಗಾಡಿನಲ್ಲಿ ಸಿಕ್ಕಿ ಅತಿಯಾಗಿ ಬೆವರು ಸುರಿದು ಹೋಗುತ್ತಿದ್ದಾಗ ದೇಹದಿಂದ ಅಗಾಧ ಮೊತ್ತದ ದ್ರವನಷ್ಟ ಸಂಭವಿಸಿ ತಲೆದೋರುವ ಪರಿಸ್ಥಿತಿ. ಈ ಸ್ಥಿತಿಯನ್ನು ನಿರ್ಜಲೀಯತೆ (ಡೀಹೈಡ್ರೇಷನ್) ಎಂದು ವೈದ್ಯರು ಕರೆದಿದ್ದಾರೂ ವಾಸ್ತವವಾಗಿ ಅದು ಇದಲ್ಲ. ನಿರ್ಜಲೀಯತೆಯಲ್ಲಿ ದೇಹ ಕ್ಷಣಮಾತ್ರವೂ ಜೀವದಿಂದಿರಲಾರದು. ಆರೋಗ್ಯಸ್ಥಿತಿಯಲ್ಲಿ ದೇಹದ ತೂಕದಲ್ಲಿ ಸುಮಾರು ಶೇಕಡ 67 ಭಾಗ ನೀರೇ. ಅಂದರೆ, 60 ಕೆ.ಜಿ. ಇರುವ ವ್ಯಕ್ತಿಯಲ್ಲಿ ಸುಮಾರು 40 ಲೀಟರಿನಷ್ಟು ನೀರಿರುತ್ತದೆ ಎಂದಾಯಿತು. ಇದರಲ್ಲಿ ಶೇಕಡ ಸುಮಾರು 8.3ರಷ್ಟು ನೀರು ನಷ್ಟವಾದರೂ ಅನಾರೋಗ್ಯ ಪರಿಸ್ಥಿತಿ ಸಂಭವಿಸುತ್ತದೆ. ವಯಸ್ಕ ವ್ಯಕ್ತಿಯಲ್ಲಿ ಯಾವುದೇ ಕಾರಣದಿಂದ 6-8 ಲೀಟರುಗಳಷ್ಟು ದ್ರವ ನಷ್ಟವಾದರೆ ಅದು ತೀವ್ರ ಆತಂಕ ಪರಿಸ್ಥಿತಿ. 12-13  ಲೀಟರುಗಳಿಗಿಂತ ಹೆಚ್ಚಾಗಿ ದ್ರವ ನಷ್ಟವಾದರಂತೂ ಮರಣ ಖಾತ್ರಿ. ಮಕ್ಕಳಲ್ಲಿ ನೀರಿನ ಕೊರತೆಯ ಈ ವಿವಿಧ ಘಟ್ಟಗಳು ಕಂಡುಬರುವುದು ಶೀಘ್ರತರ ಅಂತೆಯೇ ಆಯಾ ಘಟ್ಟಗಳಲ್ಲಿ ವ್ಯಕ್ತವಾಗುವ ಪರಿಣಾಮಗಳೂ ತೀವ್ರತರ. ಅತಿಯಾಗಿ ದ್ರವ ನಷ್ಟವಾಗಿಯೇ ದೇಹದಲ್ಲಿ ನೀರಿನ ಕೊರತೆ ಉಂಟಾಗಬೇಕೆಂದೇನೂ ಇಲ್ಲ. ಬದುಕಿರುವ ಪರ್ಯಂತವೂ ವಯಸ್ಕ ಮಾನವ ಉಸಿರು, ಬೆವರು, ಮೂತ್ರಗಳ ಮೂಲಕ ಸುಮಾರು 3 ಲೀಟರ್‍ಗಳಷ್ಟು ನೀರನ್ನು ದಿನವೊಂದಕ್ಕೆ ಕಳೆದುಕೊಳ್ಳುತ್ತಿರುತ್ತಾನೆ. ಮತ್ತು ಆಹಾರ ಪಾನೀಯಗಳ ಮೂಲಕ ಇದನ್ನು ಭರ್ತಿ ಮಾಡಿಕೊಳ್ಳುತ್ತಾನೆ. ಯಾವುದೇ ಕಾರಣದಿಂದ ಹೀಗೆ ಭರ್ತಿ ಮಾಡುವುದು ಆಗದಿದ್ದರೆ, ದೇಹದಲ್ಲಿ ನೀರಿನ ಕೊರತೆ ಮುಂದಿನ 24 ಗಂಟೆಗಳಲ್ಲಿ ಕಂಡುಬರುವುದೂ ಶತಸ್ಸಿದ್ಧ. ಆಹಾರವನ್ನು ಬಿಟ್ಟು 3-4 ವಾರಗಳು ಇರಬಹುದಾದರೂ ನೀರಿಲ್ಲದೆ ಎರಡು ದಿವಸ ಕೂಡ ಇರಲೂ ಸಾಧ್ಯವಾಗದಿರುವುದು ಈ ಕಾರಣದಿಂದಲೇ.

	ನೀರಿನ ಕೊರತೆ ಉಂಟಾದಾಗ ನೀರಡಿಕೆ ನಿಶ್ಶಕ್ತಿಗಳು ಕಂಡುಬರುತ್ತವೆ. ತಲೆಸುತ್ತು ವಾಕರಿಕೆಗಳ ಕಾಟವೂ ಇರಬಹುದು, ತುಟಿನಾಲಗೆ ಬಾಯಿಗಳು ಒಣಗಿಬರುತ್ತವೆ. ಚರ್ಮ ಶುಷ್ಕವಾಗಿದ್ದು ಜಿಗುಟಿ ಬಿಟ್ಟ ಬಳಿಕವೂ ಸ್ವಲ್ಪಹೊತ್ತು ಸುಕ್ಕಾಗಿರುವುದು ಅದರ ಸ್ಥಿತಿಸ್ಥಾಪಕ ಸಾಮಥ್ರ್ಯನಾಶದ ಪರಿಣಾಮ. ಇಡೀ ದೇಹ ಬಿಳಿಚಿಕೊಂಡಿರಬಹುದು ಅಥವಾ ನೀಲಿಗಟ್ಟಿರಬಹುದು. ಮೈ ತಣ್ಣಗಿರಬಹುದು, ಕಾವೇರಿರಲೂಬಹುದು. ಕಣ್ಣು ಗುಳಿಬಿದ್ದಿರುವುದು (ಮಕ್ಕಳಿಯಂತೂ) ಒಂದು ಪ್ರಮುಖ ಲಕ್ಷಣ. ದೇಹದಲ್ಲಿ ರಕ್ತದ ಮೊತ್ತ ಕಡಿಮೆ ಆಗುತ್ತದೆ. ಅದರ ಸಾಂದ್ರತೆ ಹೆಚ್ಚಿ ರಕ್ತ ಮಂದವಾಗಿ ಧಮನಿಗಳಲ್ಲಿ ಮಂದಗತಿಯಿಂದ ಹರಿಯುತ್ತಿರುತ್ತದೆ. ರಕ್ತದ ಒತ್ತಡ ಕಮ್ಮಿಯಾಗಿರುತ್ತದೆ. ಈ ವ್ಯತ್ಯಾಸಗಳಿಂದ ಗುಂಡಿಗೆ ಹಾಗೂ ಮೂತ್ರಪಿಂಡಗಳ ಮೇಲೆ ಆಗುವ ಪರಿಣಾಮಗಳು ಗುರುತರ. ಮೂತ್ರೋತ್ಪತ್ತಿ ದಿನನಿತ್ಯದ ಸುಮಾರು ಅರ್ಧ ಮೊತ್ತಕ್ಕೆ ಇಳಿಯುತ್ತದೆ. ಇದರಿಂದ ದೇಹದ ವಿಸರ್ಜಿತ ವಸ್ತುಗಳು ಪೂರ್ಣವಾಗಿ ಉಚ್ಚಾಟನೆಗೊಳ್ಳದೇ ದೇಹದಲ್ಲಿ ಸಂಚಯವಾಗುತ್ತಾ ದೇಹಸ್ಥಿತಿ ಶೀಘ್ರವಾಗಿ ವಿಷಮಿಸುವಂತಾಗುತ್ತದೆ. 

	ನೀರಿನ ಕೊರತೆಯನ್ನು ಹಿಂಗಲು ದೇಹಕ್ಕೆ ತಕ್ಕಷ್ಟು ನೀರನ್ನು ಒದಗಿಸಿದರೆ ಸಾಲದು. ಏಕೆಂದರೆ ಸಾಮಾನ್ಯವಾಗಿ ಯಾವ ರೀತಿಯ ಅತಿ ವಿಸರ್ಜನೆಯಿಂದಲೂ ನೀರಿನ ಕೊರತೆ ಉಂಟಾದಾಗ ಅದರ ಜೊತೆ ಲವಣಗಳೂ ನಷ್ಟವಾಗುತ್ತವೆ. ಲವಣನಷ್ಟ ಗಣನೀಯವಾಗಿದ್ದಾಗ ಸ್ನಾಯುಗಳ (ಮುಖ್ಯವಾಗಿ ಕೈಕಾಲು ಸ್ನಾಯುಗಳ) ಸೆಳೆತ ನೋವುಗಳ ಬಾಧೆ ತೀವ್ರವಾಗಿರುತ್ತದೆ. ಇಂಥ ಸಮಯಗಳಲ್ಲಿ ಅಡುಗೆ ಉಪ್ಪಿನ ಘಟಕಗಳಾದ ಸೋಡಿಯಮ್ ಮತ್ತು ಕ್ಲೋರೈಡ್ ಅಯಾನುಗಳೇ ಪ್ರಮುಖವಾಗಿ ನಷ್ಟವಾಗುವುದರಿಂದ ನೀರಿನೊಡನೆ ಸಮಚಿತ ಪರಿಮಾಣದಲ್ಲಿ ಉಪ್ಪನ್ನು ಬೆರೆಸಿಕೊಡುವುದು ವಾಡಿಕೆ. ಆದರೆ, ಯಥಾರ್ಥ ಚಿಕಿತ್ಸೆ ಎಂದರೆ ಸೋಡಿಯಮ್, ಪೊಟ್ಯಾಷಿಯಂ, ಮ್ಯಾಗ್ನೇಷಿಯಮ್, ಕ್ಲೋರೈಡ್, ಪಾಸ್ಫೇಟ್, ಲ್ಯಾಕ್ಟೇಟ್, ಬೈಕಾರ್ಬೊನೇಟ್ ಮುಂತಾದ ಅಯಾನುಗಳ ಆವಶ್ಯಕತೆ ಎಷ್ಟೆಷ್ಟಿದೆ ಎಂದು ನಿರ್ಧರಿಸಿ ಕೊರತೆ ನೀಗುವಂಥ ಯುಕ್ತದ್ರಾವಣವನ್ನು ದೇಹಕ್ಕೆ ಒದಗಿಸುವುದು. ಲವಣಗಳನ್ನು ಹೆಚ್ಚಾಗಿ ಕೊಡಬಾರದು. ದೇಹದಲ್ಲಿ ಲವಣಗಳ ಪರಿಮಾಣ ಹೆಚ್ಚಾದರೂ  ಅದರ ಫಲವಾಗಿ ನೀರಿನ ಕೊರತೆಯ ಲಕ್ಷಣಗಳು ಕಂಡುಬರುತ್ತವೆ. ಆದ್ದರಿಂದಲೇ ನೌಕಾಘಾತಕ್ಕೆ ಒಳಗಾಗಿ ಬಹಳ ದಿವಸಗಳ ತನಕ ಸಾಗರಾಂತರದಲ್ಲಿ ಸಿಕ್ಕಿಹಾಕಿಕೊಂಡಾಗ ಸಿಹಿ ನೀರಿನ ದಾಸ್ತಾನು ಮುಗಿದ ಬಳಿಕ ನೀರಡಿಕೆಯಾದರೆ ಸಮುದ್ರದ ನೀರನ್ನು ಕುಡಿಯಬಾರದು. ಹಾಗೆ ಕುಡಿದದ್ದೇ ಆದರೆ, ಕೆಲ ಕಾಲಾನಂತರ ಒದಗಬಹುದಾದ ಮರಣ ಇನ್ನೂ ಶೀಘ್ರವಾಗಿ ಸಂಭವಿಸುತ್ತದೆ. ಇದೇ ರೀತಿ ಮರಳುಗಾಡಿನಲ್ಲಿ ದಾರಿ ತಪ್ಪಿದವರು ನೀರು ದೊರೆಯದೇ ಬಾಯ್ಬತ್ತಿ ಬಸವಳಿಯುತ್ತಿರುವಾಗ ತಮ್ಮ ಮೂತ್ರವನ್ನೋ, ರಕ್ತವನ್ನೋ ಕುಡಿದು ಬಾಯ್ತಣಿಸಿಕೊಳ್ಳಲು ಪ್ರಯತ್ನಪಟ್ಟು ಸಾವು ಶೀಘ್ರತರವಾಗಿ ಅಡಸುವಂತೆ ಮಾಡಿಕೊಳ್ಳುವುದುಂಟು. ಇಂಥ ಸಂದರ್ಭಗಳಲ್ಲಿ ಅಕಸ್ಮಾತ್ ಹೊಯ್ಯುವ ಮಳೆ ನೀರನ್ನು ಸಂಗ್ರಹಿಸಿ ಇಲ್ಲವೇ ರಾತ್ರಿಯ ಇಬ್ಬನಿಯನ್ನು ಸಂಗ್ರಹಿಸಿ ಕುಡಿಯುವುದು ಯುಕ್ತ ಮಾರ್ಗ.

	ನೀರಿನ ಕೊರತೆಯಿಂದ ನರಳುವವರ ಚಿಕಿತ್ಸೆಗಾಗಿ ಯುಕ್ತಪರಿಮಾಣದಲ್ಲಿ ಯುಕ್ತ ಲವಣಗಳಿರುವ ದ್ರಾವಣವನ್ನು ಕೊಡಬೇಕಷ್ಟೇ. ಇದನ್ನು ಬಾಯ ಮೂಲಕವೇ ಕೊಡಬಹುದಾದರೂ ಅನೇಕ ವೇಳೆ ಹಾಗೇ ಮಾಡಲು ಸಾಧ್ಯವಿರುವುದಿಲ್ಲ. ಮಕ್ಕಳಲ್ಲಿ ಹಾಗೂ ಮತ್ತು ವಮನ ಮಾಡುತ್ತಿರುವ ವಯಸ್ಕರಲ್ಲಂತೂ ಇದು ನಿಜ. ಇವರಿಗೆ ಸಾಕಷ್ಟು ಮೊತ್ತದಲ್ಲಿ ಯುಕ್ತ ದ್ರಾವಣವನ್ನು ಸೂಜಿ ಮದ್ದಿನಂತೆ ಅಭಿಧಮನಿಯ ಮೂಲಕ ಕೊಡಬೇಕಾಗುತ್ತದೆ. ಮಕ್ಕಳಿಗೆ ಕೊಡಬೇಕಾಗುವ ದ್ರಾವಣ ಪರಿಮಾಣ ಸಹಜವಾಗಿಯೇ ಕಡಿಮೆಯಾಗಿರುವುದರಿಂದಲೂ ಅಭಿಧಮನಿಯ ಮೂಲಕ ಕೊಡುವುದು ಕಷ್ಟವಾಗಿರುವುದರಿಂದಲೂ ಚರ್ಮದ ಅಡಿಯಲ್ಲಿ ಸೂಚಿಮದ್ದಿನಂತೆ ಹುಗಿಸುವುದುಂಟು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ